ಏಪ್ರಿ 28, 2020

ಕರೋನ ವೈರಸ್ ಲಸಿಕೆ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?

ನನಗೂ ಗೊತ್ತಿಲ್ಲ.  ಆದ್ರೆ  TV9 ಗೆ ಗೊತ್ತಿದೆ, ನ್ಯೂಸ್ ನೋಡುತ್ತಿದ್ದವನು, ತಲೆ ಕೆಡಿಸ್ಕೊಂಡು ಬಂದು ಬ್ಲಾಗ್ ಬರೀತ್ತಿದ್ದೇನೆ .  (೪/೨೮/೨೦೨೦ :  ರಾತ್ರಿ ೯:೪೫ .... )

೧) ೧೦೦೦ ರುಪಾಯಿಗೆ ಲಸಿಕೆ ಮಾರಾಟ
೨) ಸೆಪ್ಟೆಂಬರ್ ವೇಳೆಗೆ ೪ ಕೋಟಿ  ಲಸಿಕೆ ತಯಾರು
೩) ಅದು ಕೆಲಸ ಮಾಡುವ ರೀತಿಯ ಸಂಪೂರ್ಣ ವಿವರ
೪) ಕಂಪನಿ ಮತ್ತು ಪ್ಯಾಕೇಜಿಂಗ್ ಡೀಟೇಲ್ಸ್ .

ವಾರ್ತೆ, ಕತೆ , ಜೀವ ಶಾಸ್ತ್ರದ  ಪಾಠ , ಜಾಹಿರಾತು  ಯಾವುದು ಅವಶ್ಯಕ ಯಾವುದು ಅನವಶ್ಯಕ, ಯಾವುದು ಏನು ಅಂತ ಗೊತ್ತೇ ಆಗುತ್ತಿಲ್ಲ .  ಎಲ್ಲಾನೂ  ನ್ಯೂಸೇ .

ಪಾಪ  ಈ ಚಾನೆಲ್ಲುಗಳಿಗೂ ಬೇರೆ ಸುದ್ದಿ ಇಲ್ಲ , ಬಡ್ಡಿ ಮಕ್ಳು , ಯಾಕೆ ಗೊತ್ತಾ ? ಏನು ಗೊತ್ತಾ? ಹೆಂಗೆ ಗೊತ್ತಾ ? , ಯಾರು ಗೊತ್ತಾ ? ಏನ್ಮಾಡಿದ್ರು ಗೊತ್ತಾ  ? ಜಾಹಿರಾತಿನ ನಂತರ , ೨೪ ಗಂಟೆ ಇದೆ ಗೋಳು .

ದೊರದರ್ಶನ ಚಾನೆಲ್  ಬುದ್ದಿವಂತಿಕೆ ತೋರಿಸಿದೆ , ಹಳೆಯ ಒಳ್ಳೆ ಕಾರ್ಯಕ್ರಮಗಳನ್ನ  ಮತ್ತೆ ಬಿತ್ತರಿಸುತ್ತಿದೆ .


ಮತ್ತೊಮ್ಮೆ ತೋರಿಸಬಹುದಾದ ಯಾವುದೇ  ಸಂವಾದ , ಸ್ಪರ್ಧೆ, ಚಿಂತನೆ , ವಾಚನ, ಪಠಣ , ಕಾರ್ಯಕ್ರಮಗಳನ್ನೂ ತಮ್ಮ ಜೀವಮಾನದಲ್ಲೇ ಮಾಡಿರದ ಚಾನೆಲ್ಲುಗಳು  ಲಾಕ್ ಡೌನ್  ಪರಿಸ್ಥಿತಿಯಲ್ಲಿ ಮಾಡಬಹುದಾದ  ಕೆಲಸ  ; ಕೇವಲ  ಹುಚ್ಚು ಹುಚ್ಚಾದ ಅರಚಾಟ . ೨೪ ಗಂಟೆ ಇನ್ನೇನಿದೆ.

ಮತ್ತೆ ನೋಡುವವರ ಕರ್ಮ .

ಮಾರ್ಚ್ 31, 2020

ಕರೋನ ಪ್ರಸಂಗ





ಕಳೆದುಕೊಂಡಿದ್ದ ಸಮಯವನ್ನು ಯಾರೋ ತಂದು ಕೈಗಿಟ್ಟಂತೆ,  ಸಂಪೂರ್ಣ ಖಾಸಗಿತನದ ಭಾಷೆ ಕೊಟ್ಟಂತೆ , ಮನೆಯಲ್ಲೇ ಕೆಲಸ ಮಾಡುವ ಕನಸನ್ನು ಕರುಣಿಸಿದಂತೆ , ಹೆಂಡತಿ ಮಕ್ಕಳೊಂದಿಗೆ ಇರುವ ಹಾಗೆ ಅನುಗ್ರಹಿಸಿದಂತೆ , ಇದ್ದಷ್ಟರಲ್ಲೇ ಇರುವ ಬುದ್ದಿ ಬಂದಂತೆ . ಷೇರು ಮಾರುಕಟ್ಟೆ ನಮಗಾಗಿ ಕೆಳಗಿಳಿದು ನಿಂತಂತೆ , ನಿವೃತ್ತಿಯ ನಂತರದ ಬದುಕಿನ ಮುನ್ನೋಟವನು ,ಕಾಲ ಇಂದೇ ತೋರಿಸುತ್ತಿರುವಂತೆ. ನೃತ್ಯ ,ಗಾನ, ನಿದ್ರಾದಿಗಳಿಗೆ  ದಿನ ಬೆಳೆದು ನಿಂತಂತೆ . ಕರೋನಾ ದಿಗ್ಬಂಧನದ ಮೊದಲ ಕೆಲವು ದಿನಗಳು.

ದಿನಗಳೆದಂತೆ ಜೀವ ಹಿಂಡುತ್ತಿರುವ ಖಾಸಗಿಯ ಏಕಾಂತ , ನಾವೇ ಮುರಿಯುತ್ತಿರುವ ಜೀವ ಸರಪಳಿಯ ಸಿದ್ದಾಂತ , ಜೊತೆಯಿರದೆ ಜೊತೆಗಿದ್ದ ಬದುಕುಗಳ ಬವಣೆ , ಪುರಸಭೆ ನೌಕರರು  ಮತ್ತು ಪೋಲೀಸರ ಬಗ್ಗೆ ಹೆಚ್ಚುತ್ತಿರುವ ಪ್ರೀತಿ ,ಗೌರವ .  ನಿಧಾನವಾಗಿ ಎಲ್ಲರನ್ನು ಆವರಿಸುತ್ತಿರುವ ಪರಸ್ಪರ ಅವಲಂಬನೆಯ ಬದುಕು . ಏನ ಮಾಡಿದರೇನು ಒಬ್ಬನೇ ಬದುಕಲಾಗದೆನ್ನುವ ಸತ್ಯ .  ಭಗವಂತನಾಟಕ್ಕೆ ಅಸಹಾಯಕನಾಗಿ ಬೆಳೆಯುತ್ತಿರುವ ಭಕ್ತಿ ಮತ್ತು ಆಧ್ಯಾತ್ಮ,  ಕರೋನ ಮಧ್ಯಂತರ .

ಬದುಕುವ ಆಸೆಗೆ ಬದುಕು ಕಳೆದುಕೊಳ್ಳುತ್ತಿದೇವೆಯೋ ಎನ್ನುವ ಶಂಕೆ , ಹೊರಗೆ ಕಾಲಿಡುವ ದಿನ ನೆನೆಸಿಕೊಂಡು ಆಗುತ್ತಿರುವ ಭಯ , ಹೊರ ಹೋಗಬಹುದೇ ಇನ್ಮುಂದೆ ಎನ್ನುವ ಆತಂಕ . ಸಮಾಜಮುಖಿಯಾಗಿ , ಸರಳವಾಗಿ , ನೈಸರ್ಗಿಕವಾಗಿ ಬದುಕನ್ನು ಅತ್ಯಂತ ಸಹಜವಾಗಿ ಅನುಭವಿಸಬೇಕು ಎನ್ನುವ ಹಂಬಲ .

ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಯ ಕಡೆಗೆ ಒಂದು ನೋಟ . ಆರ್ಥಿಕ ಹಿಂಜರಿತದಿಂದ ಆಗಬಹುದಾದ ನೌಕರಿ ಅನಾಹುತದ ಚಿಂತೆ,  ಉಳಿತಾಯವಾಗಿರುವ  ಹಣದ ಲೆಕ್ಕಾಚಾರ .  ತಡವಾಗಿ ತಲೆಗೆ ಕಾಲಿಟ್ಟಿರುವ ಉಳಿತಾಯದ ಬುದ್ದಿ ; ಕರೋನ ಸಿನಿಮಾ ಮುಕ್ತಾಯ .

ನೆನಪಾದ, ಕೂತು ತಿಂದರೆ ಕುಡಿಕೆ ಹೊನ್ನು ಸಾಲದೆನ್ನುವ  ಗಾದೆ, ಮತ್ತೆ ಜೊತೆಗಿರುವ ಸಾಲ ಭಾದೆ.
ತನು , ಮನ ದ ಭಯವನ್ನು ತುಳಿದು , ಮಲಗಿದ್ದ  ವಿಕ್ರಮಾದಿತ್ಯನನ್ನು ಒದ್ದು ಎಬ್ಬಿಸಿದ ಆಸೆ, ಕನಸು.  ಜಾಗೃತವಾದ ಛಲ ;. ಬಿಲ್ಲು  ಬೇತಾಳಗಳನ್ನು  ಹೊರಲು ಮತ್ತೆ ತಯಾರಾಗಿ ನಿಂತ ವೀರ .

ಎಂದಿನಂತೆ ನಡೆಯಲಿರುವ , ಬೇತಾಳದ ಕತೆಗಳು , ಪ್ರಶ್ನೋತ್ತರಗಳು  ಮತ್ತು ಜೀವನ ಚಕ್ರ .






ಸೆಪ್ಟೆಂ 13, 2019

ಬೆಂಕಿಯ ಬೆಳಕಿದು ಸುಡದಿರುವುದೇ



ಕೊಳ್ಳುಬಾಕತನ ಪ್ರಚೋದಿಸಿ ಬೆಳೆಯುತ್ತಿರುವ ಮಾರುಕಟ್ಟೆ .

ಕುಲಾಧಾರಿತ ಪುಕ್ಕಟ್ಟೆ ಭಾಗ್ಯಗಳ ಸರ್ಕಾರ .

ನೌಕರಿಗಾಗಿಯೇ ಕಲಿಸಲ್ಪಡುತ್ತಿರುವ ಅಮೂರ್ತ ಜ್ಞಾನ .

ಕೌಟುಂಬಿಕ ಸಂವೇದನೆಯನ್ನ ಕಳೆಯುತ್ತಿರುವ ನೌಕರಿ .

ಸಹನೆ , ಪರಿಶ್ರಮವನ್ನ ಆಳುಗಳ  ಆಸ್ತಿಯಾಗಿಸಿರುವ ಕುಟುಂಬ .

ಚಪಲದ ನಿಯಂತ್ರಣದಲ್ಲಿರುವ  ದೇಹ.

ಬೆಂಕಿಯ ಬೆಳಕಿದು ಸುಡದಿರುವುದೇ ?

ಸೆಪ್ಟೆಂ 19, 2017

ಕಾಣದ ಕಡಲಿನ ನನ್ನ ಭಾವ

ಸೋಲೆಂಬ ಸಾವದು  ಕ್ಷಣಕೊಮ್ಮೆ ಕುಟುಕಿಹುದು  ಮನವನ್ನು ,ಮತ್ಸರವ ತಂದಿಹುದು ಮನದಲ್ಲಿ .
ಸೋಲೆಂಬ ಸಾವದು ಪಾಪ ಪ್ರಜ್ಞೆಯದು ,ಅಶಾಂತಿಯ ತಂದಿಹುದು ನೆನೆ ನೆನೆದು ಮನದಲ್ಲಿ.
ಸೋಲೆಂಬ ಸಾವದು ಸೋತೆನೆಂಬ ಭಾವ, ಸಾವೆಂಬ ಸೋಲನ್ನು ಕರೆವುದು .

ಕರೆಯದಿರು ಜೀವ ಸಾವಿನ ಸೋಲನ್ನು , ಸೋತೆನೆಂಬ ಭಾವ ಬೇಡ ಎಂದಿಗೂ .
ನಡೆಯುತ್ತಿರು ಸತತ ಮತ್ತೊಂದು ಸಮರಕ್ಕೆ ,
ಸೋಲೆಂಬ  ಸಾವದು ಅನವರತ ಕ್ಷಣಿಕ ,ಸಾವೆಂಬ ಸೋಲು ಮುತ್ತಿಡುವ ತನಕ .

ಸಾವೆಂಬ ಯುಕ್ತಿಯದು ಭಗವಂತನದು , ಎಲ್ಲರನು  ಗೆಲ್ಲುವುದು .
ಸತ್ತಮೇಲೆ ಬದುಕುವುದು ಮತ್ತೊಂದು ಯುಕ್ತಿ , ಸವೆಯುವ ಬದುಕನ್ನು ಗೆದ್ದವರ ಮುಕ್ತಿ .
ಬದುಕುವ ಧ್ಯೇಯ ಬದುಕೊಂದೆ ಆಗಿರದೆ , ಮತ್ತೇನೋ ಆಗಿಹುದು ಭಗವಂತನಾಟ .

ಬುದ್ದಿಯ ಬಲವಿದು ಮೀರಿಹುದು ಎಲ್ಲೆಯನು , ಭಗವಂತನೊಂದಿಗೆ ಇಹುದು ಸೆಣಸಾಟ .
ಜೇಡರ ಬಲೆಯಲ್ಲಿ ಬಿದ್ದಿರುವ ಸೊಳ್ಳೆಗೆ , ಇಹುದು ಮತ್ತೊಂದು ಬಲಿಯ ಹುಡುಕಾಟ.
ಬಲಿಯ ನೋಡದೆ ಕೊರೆಯುತಿರು ಬಲೆಯನ್ನು , ತಿನ್ನದೇ ಬದುಕೆ  ನೀ ಸಿಕ್ಕಿರುವ ಬಲಿಯನ್ನು .

ಭುವಿಯ ಬದುಕಿದು ವಿಶ್ರಾಂತಿ ಧಾಮ , ನೀನೆಸಿದೊಡೆ ಏಕಾಂತದ ಬದುಕು ,
ಸೋಲದ ಸಮರವಿದು ಸಾವಿನಾವರೆಗೆ , ಗೆಲುವು ಬಯಸುವ ಜೀವದ ಕಡೆಗೆ .
ಸಾವಿನ ನಂತರದ ಖುಷಿಯದು ತಿನ್ನದಾ ಊಟ , ಬಾಣಸಿಗನ ಕೈಯ ಮಾಟ .







ಸೆಪ್ಟೆಂ 15, 2017

ಪಕ್ಕದ ಮನೆಯವಳು




ಪಕ್ಕದ ಮನೆಯವಳ್ಯಾಕೋ ತುಂಬಾ ಚೆನ್ನಾಗಿ ಕಾಣ್ತಾಳೆ
ಹೆಂಡತಿಗಿಂತ ತುಂಬಾ ಒಳ್ಳೆಯವಳಂತ ಅನುಸ್ತಾಳೆ.

ಅವಳ ಮೌನದಾಗಿರೋ ಚೆಂದ
ಹೆಂಡ್ತಿ ಮಾತಲ್ಲಿ ಕಾಣ್ತಿಲ್ಲ .

ಅವಳ ಕೈಯಲ್ಲಿ ಕಾಣಿಸೋ ರುಚಿಯು
ಹೆಂಡ್ತಿ ಅಡುಗೆಲೇ ಇಲ್ಲ .

ಏನಿದು ಮಾಯೆ ? ದೂರದ ಬೆಟ್ಟವಲ್ಲ ಆಕೆ  .
ಕೈಗೆಟುಕದ ದ್ರಾಕ್ಷಿಯಾದರೂ  ಹುಳಿ ಯೇ  ಅನ್ನಿಸ್ತಿಲ್ಲ .

ಕಣ್ಣಿನ ರುಚಿಯಿದು , ಮನಸಿನ ಬಗೆಯಿದು .
ಪಕ್ಕದ ಮನೆಯಾವಳ್ಯಾಕೋ ಚೆಂದ 

ಅಕ್ಟೋ 4, 2010

ಗುಳುಂ ಗುಳುಂ

ಬರ ಬಂದಾಗ ಹಣ ಕೂಡಿಸಿ
ಮಾಡಿದ್ದೇನೋ ಗುಳುಂ ಗುಳುಂ

ಮನೆ ಕಟ್ಟಾಕೆ ಬಜೆಟ್ ಮಾಡಿ
ಮಾಡಿದ್ದೇನೋ ಗುಳುಂ ಗುಳುಂ

ಬಂದರಿನ್ಯಾಗೆ ಅದಿರು ಕದ್ದು
ಮಾಡಿದ್ದೇನೋ ಗುಳುಂ ಗುಳುಂ

ಒಲಂಪಿಕ್ ಆಟ ಆಡಿಸಿ
ಮಾಡಿದ್ದೇನೋ ಗುಳುಂ ಗುಳುಂ

ವೋಲ್ವೋ ಬೆಂಜ್ ರೋಡಿಗೆ ತಂದು
ಮಾಡಿದ್ದೇನೋ ಗುಳುಂ ಗುಳುಂ

ಶಿವನ ತಲೆಯ ಗಂಗೆ ಕೂಡ ಕೊಳಕಾದಳು ಇಲ್ಲಿ
ಗುಳುಂ ಬಾಕರ ಸ್ನಾನ ಪೂಜೆ , ಪಾಪಕ್ಕೆ ಜಾಗ ಮತ್ತೆಲ್ಲಿ ?

ಮೇ 30, 2010

ದೊಂಬರು ಬಂದರು ದೊಂಬರು

ನಿನ್ನೆ ಬಂಗಾರಿ ೨೪ * ೭ ನ್ಯೂಸ್ ಚಾನೆಲ್ಲಿನ ಎಕ್ಷ್ಕ್ಲುಸಿವ್ ನ್ಯೂಸ್ ಏನಪ್ಪಾ ಅಂದ್ರೆ , ಅಲ್ಲಿ ದುರ್ಗದಲ್ಲಿ ಯಾವನೋ ಕುಡುದು ಮರ ಹತ್ತಿದ್ದನಂತೆ , ಸುಮಾರು ಹೊತ್ತು ಕಷ್ಟ ಪಟ್ಟು ಜನ ಅವನನ್ನ ಕೆಳಗೆ ಇಳ್ಸಿದ್ರಂತೆ, ಸ್ವಲ್ಪ ಹೊತ್ತಾದ ಮೇಲೆ ಅವನು ನೀರಿನ ಟ್ಯಾಂಕ್ ಮೇಲೆ ಹೋಗಿ ಕೂತ್ಕಂಡ್ನಂತೆ, ಅವನನ್ನ ಪೊಲೀಸರು ಜನಗಳು ಕಷ್ಟ ಪಟ್ಟು , ಹರ ಸಾಹಸ ಮಾಡಿ ಕೆಳಗೆ ಇಳಿಸಿದರಂತೆ .

ಅಲಾಲಲ ಸಿಂಗ್ರಿ, ಅವನ ಜೊತೆಗೆ ನೀನು ಕೂತ್ಕಂಡು ಪೆಗ್ಗ್ ಹಾಕಿತಿದ್ದ್ಯ ಮಗಾ , ಅದ್ಯಾವ ಸೀಮೆ ಕಳ್ಳಬಟ್ಟಿಸಾರಾಯಿ ಕುಡಿದಿಯೋ, ನಿನ್ನ ಗೆಳೆಯ ಗಿಡ ಹತ್ತಿದ್ದು ಕ್ಯಾಮೆರದಾಗ ಹಿಡ್ಕೊಂಡು ದೊಡ್ಡ ನ್ಯೂಸ್ ಅನ್ನಂಗೆ ತೋರಿಸಿ ಬಿಟ್ಟೆ , ಅಲಾಲ ಸಿಂಗ್ರಿ , ನಿಮ್ಮು ರೀಡರ್ ಪ್ರಶ್ನೆ ಮೇಲೆ ಪ್ರಶ್ನೆ , ಇದು ಎಸ್ತೋತ್ತಿಗಾಯ್ತು , ಎಂಗಾಯ್ತು , ಜನ ಎನ್ಮಾಡ್ತಿದ್ದರೆ ಕೇಳಿದ್ದೆ , ಕೇಳಿದ್ದು .... ಸಿಂಗ್ರಿ .. ಸಿಂಗ್ರಿ ಕಿಸ್ಕಂಡು,ಕಿಸ್ಕಂಡು ಹೇಳಿದ್ದೆ .. ಹೇಳಿದ್ದು

ಸಿಂಗ್ರಿ ಕಡಿಮೆ ಕುಡಿ ಕಣ್ಲಾ, ನೀರಿನ ಟ್ಯಾಂಕ್ ಹತ್ತಿದರೆ ಕೆಳಗೆ ಇಳಸಬಹುದು, ನ್ಯೂಸ್ ನ ಚಟ್ಟ ಹತ್ತಿಸ್ದ್ರೆ ಇಳ್ಸಾಕಾಗಕಿಲ್ಲ . ಸುವರ್ಣ ಅಂದ್ರೆ ಬಂಗಾರ ಕಣ್ಲಾ , ಸುವರ್ naa ಅಂತ ಅಲ್ಲ ...

ಈ ಬ್ಲಾಗ್ ಅನ್ನು ಹುಡುಕಿ